ಸಾರನಾಥ
 	ಭಾರತದ ಉತ್ತರ ಪ್ರದೇಶ ರಾಜ್ಯದ ವಾರಾಣಸಿ ಜಿಲ್ಲೆಯಲ್ಲಿರುವ ಒಂದು ಪವಿತ್ರ ಸ್ಥಳ. ಭಗವಾನ್ ಬುದ್ಧ ತನ್ನ ಪ್ರಥಮ ಬೋಧನೆ ಮಾಡಿದ ಬೌದ್ಧಧರ್ಮನುಯಾಯಿಗಳ ಪುಣ್ಯಕ್ಷೇತ್ರ. ಕಾಶಿಯ ಉತ್ತರದಲ್ಲಿ ಸು. 6ಕಿಮೀ ದೂರದಲ್ಲಿ ವರುಣಾನದಿಯ ದಡದಲ್ಲಿರುವ ಬೌದ್ಧರ ನಾಲ್ಕು ಪವಿತ್ರ ಕ್ಷೇತ್ರಗಳಲ್ಲಿ ಇದೂ ಒಂದು. ಇಲ್ಲಿರುವ ಒಂದು ದೊಡ್ಡ ಗುಡ್ಡದ ಮೇಲೆ ಸಾರಂಗನಾಥಎಂಬ ಶಿವದೇವಾಲಯವಿದ್ದು ಈ ಪ್ರದೇಶವನ್ನು ಸಾರಂಗನಾಥವೆಂದು ಕರೆಯುತ್ತಿದ್ದು ಅದೇ ಸಾರನಾಥವೆಂದಾಯಿತೆಂದು ಹೇಳುವರು. ಬುದ್ಧನ ಅವಶೇಷಗಳಿರುವ ಸ್ತೂಪ, ಬೌದ್ಧ ದೇವಾಲಯ ಮತ್ತು ಸಂಘಾರಾಮಗಳಿಂದ ಈ ಸ್ಥಾನ ಬೌದ್ಧರ ಧರ್ಮಕ್ಷೇತ್ರವಾಗಿದೆ. 11ನೆಯ ಜೈನ ತೀರ್ಥಂಕರ ಶ್ರೇಯಾಂಕನಾಥ ತಪಸ್ಸನ್ನಾಚರಿಸಿ ದೇಹವಿಟ್ಟದ್ದು ಇಲ್ಲಿಯೇ ಎಂದು ಜೈನಗ್ರಂಥಗಳಲ್ಲಿ ಉಲ್ಲೇಖಿಸಿದೆ. ಬೌದ್ಧಗ್ರಂಥಗಳಲ್ಲಿ ಸಾರನಾಥಕ್ಕೆ ಋಷಿಪಟ್ಟಣ ಮತ್ತು ಮೃಗದಾವ ಎಂಬ ಹೆಸರಿತ್ತೆಂದು ದಾಖಲಾಗಿದೆ. ತಥಾಗತನು ಜಿಂಕೆಯ ರೂಪಧರಿಸಿ, ಜಿಂಕೆಗಳರಾಜನಾಗಿದ್ದು, ಆತ್ಮತ್ಯಾಗ ಮಾಡಿದ್ದರಿಂದ ಈ ಸ್ಥಳಕ್ಕೆ ಮಾಹಾತ್ಮ್ಯ ಬಂದಿರುವುದಾಗಿ ಜಾತಕ ಕಥೆಯೊಂದು ತಿಳಿಸುತ್ತದೆ. ಮಧ್ಯಕಾಲದ ಶಿಲಾಲೇಖಗಳಲ್ಲಿ ಇದಕ್ಕೆ ಸದ್ಧರ್ಮ ಚಕ್ರಪ್ರವರ್ತನ ವಿಹಾರ ಎಂಬ ಹೆಸರಿದ್ದುದಾಗಿ ಕಂಡುಬಂದಿದೆ.

	ಬುದ್ಧನ ಕಾಲದಲ್ಲಿ ಈ ಸ್ಥಳ ಪ್ರಸಿದ್ಧಿಯನ್ನು ಪಡೆದಿತ್ತು. ಸಿದ್ಧಾರ್ಥ ಬುದ್ಧನಾಗಿ ಮೊದಲು ತನ್ನನ್ನು ತೊರೆದು ಹೋಗಿದ್ದ ಐದು ಜನ ಬ್ರಾಹ್ಮಣ ವಿದ್ಯಾರ್ಥಿಗಳನ್ನು ಇಲ್ಲಿ ಸಂಧಿಸಿ ತನ್ನ ಪ್ರಥಮ ಧರ್ಮೋಪದೇಶವನ್ನು ಮಾಡಿದ. ಕುಷಾಣರಕಾಲದ ಒಂದು ಶಿಲಾಲೇಖದಲ್ಲಿ ಈ ಉಪದೇಶದ ಮುಖ್ಯ ವಿಷಯಗಳು ಅಡಕವಾಗಿವೆ. ಬುದ್ಧ ತನ್ನ ಶಿಷ್ಯಸಂಘದ ಅಡಿಗಲ್ಲನ್ನಿಟ್ಟಿದ್ದು ಇಲ್ಲಿಯೇ. ಕಾಶಿಯ ಶ್ರೀಮಂತ ಗೃಹಸ್ಥ ಯಶ ಮತ್ತು ಅವನ 54 ಜನ ಸ್ನೇಹಿತರು ಬೌದ್ಧಧರ್ಮದ ದೀಕ್ಷೆಯನ್ನು ಹೊಂದಿದ ಅನಂತರ ಅವರನ್ನೂ ತನ್ನ ಮೊದಲಿನ 5 ಜನ ಶಿಷ್ಯರನ್ನೂ ಕೂಡಿಸಿ 60 ಜನರ ಪ್ರಥಮ ಭಿಕ್ಷು ಸಂಘವನ್ನು ಬುದ್ಧ ಇಲ್ಲಿ ಸ್ಥಾಪಿಸಿದ.

	ಮುಂದೆ ಮಗಧ ಸಾಮ್ರಾಜ್ಯದ ಅರಸ ಅಶೋಕ ಕಳಿಂಗ ಯುದ್ಧದಲ್ಲಿ ನಡೆದ ರಕ್ತಪಾತದಿಂದ ಮನಪರಿವರ್ತನೆ ಹೊಂದಿ ಅಹಿಂಸಾಪ್ರಧಾನವಾದ ಬೌದ್ಧಧರ್ಮ ಅನುಸರಿಸಿದ. ಅಲ್ಲದೆ ಬೌದ್ಧಧರ್ಮಕ್ಷೇತ್ರಗಳ ಪರ್ಯಟನ ಮಾಡಿ ಸಾರನಾಥದಲ್ಲಿ ಅನೇಕ ಕಟ್ಟಡಗಳನ್ನು ಕಟ್ಟಿಸಿದ. ಅವುಗಳಲ್ಲಿ ಸು. 30 ಮೀ ಎತ್ತರದ ಧರ್ಮರಾಜಿಕ ಸ್ತೂಪ ಮತ್ತು ಅಶೋಕನ ಧರ್ಮೋಪದೇಶಗಳನ್ನೊಳಗೊಂಡ ಶಿಲಾಸ್ತಂಭ-ಇವು ಪ್ರಸಿದ್ಧವಾದವು. ಧರ್ಮರಾಜಿಕ ಸ್ತೂಪ ಬಹುಕಾಲ ಸಾರನಾಥದ ಪ್ರಮುಖ ಕಟ್ಟಡವಾಗಿದ್ದು 1794ರಲ್ಲಿ ಕಾಶಿಯ ಜಗತ್ಸಿಂಹನೆಂಬುವನು ಇದನ್ನು ಕೆಡವಿಸಿದನೆನ್ನುವರು. ಅಶೋಕನ ಶಿಲಾಸ್ತಂಭ ಸು. 21 ಮೀ ಎತ್ತರವಿದ್ದು, ತುದಿಯಲ್ಲಿ ಸಿಂಹ-ಶಿಖರವಿರುವುದು. ನಾಲ್ಕು ಸಿಂಹಗಳು ಜಗತ್ತನ್ನು ಅವಲೋಕಿಸುವಂತಿದ್ದು, ಅವುಗಳ ಕೆಳಗೆ ಪದ್ಮವೊಂದಿರುವುದು. ಈ ಪದ್ಮದ ಕೆಳಗೆ ನಾಲ್ಕು ಕಡೆಗಳಲ್ಲಿ ಆನೆ, ಕುದುರೆ, ಎತ್ತು, ಸಿಂಹ ಈ ನಾಲ್ಕು ಪ್ರಾಣಿಗಳು ಚಿತ್ರಿತವಾಗಿವೆ. ಪ್ರತಿ ಎರಡು ಪ್ರಾಣಿಗಳ ನಡುವೆ ಒಂದೊಂದು (24 ಅರೆಯ) ಚಕ್ರವಿದೆ. ಸಿಂಹ-ಶಿಖರದ ಮೇಲ್ಭಾಗದಲ್ಲಿ ಒಂದು ದೊಡ್ಡ ಧರ್ಮಚಕ್ರವಿತ್ತು. ಈಗ ಅದು ಸಂಪೂರ್ಣ ಭಗ್ನವಾಗಿರುವುದು. ಅಲ್ಲದೆ ಮುಸ್ಲಿಮ್ ದಾಳಿಯಲ್ಲಿ ಸ್ತಂಭವೇ ಎರಡು ತುಂಡುಗಳಾಗಿ ಬಿದ್ದಿದೆ. ಧರ್ಮಚಕ್ರವನ್ನೊಳಗೊಂಡ ಈ ಸಿಂಹ_ಶಿಖರ ಆಧುನಿಕ ಭಾರತದ ರಾಷ್ಟ್ರಮುದ್ರೆಯಾಗಿದೆ. ಧರ್ಮರಾಜಿಕಸ್ತೂಪ ಮತ್ತು ಶಿಲಾಸ್ತಂಭವಲ್ಲದೆ ಧಮೇಕಸ್ತೂಪವೆಂಬ ಮತ್ತೊಂದು ಕಟ್ಟಡವೂ ಅಶೋಕನ ಕಾಲದಲ್ಲಿ ಪ್ರಾರಂಭಿಸಲ್ಪಟ್ಟಿತೆಂದು ನಂಬಲಾಗಿದೆ.

	ಶುಂಗ ಅರಸರ ಕಾಲದ ಕಟ್ಟಡಗಳ ಬಗೆಗೆ ಹೆಚ್ಚು ಸಂಗತಿಗಳು ದೊರೆಯದಿದ್ದರೂ ಧರ್ಮರಾಜಿಕಸ್ತೂಪದ ಸಮೀಪವಿರುವ ಕೆಲವು ಕೆತ್ತನೆಯ ಕಂಬಗಳು ಈ ಕಾಲದಲ್ಲಿ ನಿರ್ಮಿಸಲ್ಪಟ್ಟವು. ಕುಷಾಣರ ಕಾಲದಲ್ಲಿ ಮಧುರೆ ಹೆಚ್ಚು ಪ್ರಾಶಸ್ತ್ಯ ಹೊಂದಿದ್ದರೂ ಸಾರನಾಥ ಬೆಳೆಯುತ್ತಾ ನಡೆಯಿತು. ಕ್ಷತ್ರಪ ಖರಪಲ್ಲನ ಮತ್ತು ವನಸ್ಫರ ಇವರ ಪ್ರೋತ್ಸಾಹದಿಂದ ಮಧುರೆಯ ಭಿಕ್ಷುಬಲನೆಂಬುವನು ಇಲ್ಲಿ ಕೆಂಪುಕಲ್ಲಿನಲ್ಲಿ ಕೊರೆದ ಬೋಧಿಸತ್ವನ ದೊಡ್ಡ ಮೂರ್ತಿಯನ್ನು ಸ್ಥಾಪಿಸಿದ. ಸರ್ವಾರ್ಥವಾದಿ ಶಾಖೆಯ ಬೌದ್ಧ ಭಿಕ್ಷುಗಳು ಇಲ್ಲಿ ಹಲವು ಮಠಗಳನ್ನು ಕಟ್ಟಿದರು. ಸಾರನಾಥದ ಸುವರ್ಣಯುಗ ಗುಪ್ತ ಅರಸರ ಕಾಲದಲ್ಲಿ ಮುಟ್ಟಿತೆಂದು ಹೇಳಬಹುದು. ಅನೇಕ ಸುಂದರ ವಿಗ್ರಹಗಳು, ಮೂಲಗಂಧಕುಟಿ ಎಂದು ಪ್ರಸಿದ್ಧಿಹೊಂದಿದ ಮುಖ್ಯ ದೇವಾಲಯ, ಧಮೇಕಸ್ತೂಪದ ಸುತ್ತಲೂ ಇರುವ ಸುಂದರ ಕಟ್ಟಡಗಳು ಈ ಕಾಲದಲ್ಲಿ ನಡೆದ ಮುಖ್ಯ ಕಾರ್ಯಗಳು. ಚೀನಿಯಾತ್ರಿಕ ಫಾಹಿಯಾನನು ಸಾರನಾಥಕ್ಕೆ ಭೇಟಿ ಕೊಟ್ಟನೆಂದು ಹೇಳಲಾಗಿದೆ.

	ಮುಂದೆ ಹೂಣರ ದಾಳಿಗಳಿಂದ ಸಾರನಾಥದ ಅನೇಕ ಮಂದಿರಗಳಿಗೆ ಧಕ್ಕೆಯುಂಟಾಯಿತು. ಆದ್ದರಿಂದ ಕನೋಜದ ಶ್ರೀಹರ್ಷ ಬೌದ್ಧಧರ್ಮ ಪ್ರಸಾರಧೋರಣೆಯ ಅಂಗವಾಗಿ ಧಕ್ಕೆ ಹೊಂದಿದ್ದ ಸಾರನಾಥದ ಮಂದಿರಗಳನ್ನು ಜೀರ್ಣೋದ್ಧಾರಮಾಡಿದ. ಈ ಕಾಲದಲ್ಲಿ ಪ್ರಸಿದ್ಧ ಚೀನಿಯಾತ್ರಿಕ ಯುವಾನ್‍ಚಾಂಗ್ ಸಾರನಾಥದ ದರ್ಶನಮಾಡಿ ಇಲ್ಲಿಯ ಬೌದ್ಧಮಂದಿರಗಳ ಸಂಪೂರ್ಣ ಚಿತ್ರವನ್ನು ಕೊಟ್ಟಿದ್ದಾನೆ. ಅವನು ಧರ್ಮರಾಜಸ್ತೂಪ ಮತ್ತು ಕನ್ನಡಿಯಂತೆ ಹೊಳೆಯುತ್ತಿದ್ದ ಅಶೋಕಸ್ತಂಭವನ್ನು ನೋಡಿದ್ದ. ಇಲ್ಲಿಯ ಸುಪ್ರಸಿದ್ಧ ಸಂಘಾರಾಮದಲ್ಲಿ ಹೀನಯಾನದ ಸಮ್ಮಿತೀಯ ಶಾಖೆಗೆ ಸೇರಿದ 1500 ಭಿಕ್ಷುಗಳು ವಾಸಿಸುತ್ತಿದ್ದರೆಂದೂ ಪ್ರಮುಖ ದೇವಾಲಯದಲ್ಲಿ ಧರ್ಮಚಕ್ರಪ್ರವರ್ತನ ಮುದ್ರೆಯಲ್ಲಿರುವ ಬುದ್ಧನ ಲೋಹಮೂರ್ತಿಯಿತ್ತೆಂದೂ ಹೇಳಿದ್ದಾನೆ.

	ಬಂಗಾಲದ ಪಾಲ ಅರಸರ ಕಾಲದಲ್ಲಿ ಸಾರನಾಥ ಪ್ರಸಿದ್ಧಿ ಪಡೆಯಿತು. ಆದರೆ ಘಸ್ನಿ ಮಹಮದ್ ಕಾಶಿಯ ಮೇಲೆ ದಾಳಿ ಮಾಡಿದಾಗ ಸಮೀಪದಲ್ಲಿದ್ದ ಸಾರನಾಥದ ಮಂದಿರಗಳಿಗೂ ಧಕ್ಕೆಯಾಯಿತು. 1026ನೆಯ ವರ್ಷದ ಶಿಲಾ ಲೇಖದಲ್ಲಿ ಸ್ಥಿರಕಾಲ ಮತ್ತು ವಸಂತಕಾಲರೆಂಬ ಸೋದರರು ಸಾರನಾಥದ ಕೆಲಮಂದಿರಗಳನ್ನು ಜೀರ್ಣೋದ್ಧಾರ ಮಾಡಿಸಿದ್ದಾಗಿ ಉಲ್ಲೇಖವಿದೆ. ಮುಂದೆ ಸಾರನಾಥ ಕಳಚುರಿ ಗಾಂಗೇಯ ದೇವನ ವಶಕ್ಕೆ ಬಂತು. 12ನೆಯ ಶತಮಾನದಲ್ಲಿ ಕನೋಜದ ಗಹದ್ವರ ಅರಸರು ಸಾರನಾಥದ ಒಡೆಯರಾದರು. ಗೋವಿಂದಚಂದ್ರನ (1114-54) ರಾಣಿ ಕುಮಾರದೇವಿ ಇಲ್ಲಿ ಧರ್ಮಚಕ್ರ ಜಿನವಿಹಾರವೆಂಬ ಒಂದು ದೊಡ್ಡ ಮಠವನ್ನು ಕಟ್ಟಿಸಿದಳು. ಇಲ್ಲಿಂದ ಮುಂದೆ ಸಾರನಾಥದ ಪ್ರಾಶಸ್ತ್ಯ ಕಡಿಮೆಯಾಗುತ್ತ ನಡೆದು, ಮುಸ್ಲಿಮರ ದಾಳಿಗಳಿಗೆ ಸಿಕ್ಕಿ ಇಲ್ಲಿಯ ಮಂದಿರಗಳು ಜರ್ಜರಿತವಾದವು. ಅಲ್ಲಿಂದ ಭೂಗರ್ಭದ ಪಾಲಾಗಿದ್ದ ಬೌದ್ಧ ವಸತಿಗಳು ಅನಂತರ ಶೋಧಿಸಲ್ಪಟ್ಟು ಬೆಳಕಿಗೆ ಬಂದಿವೆ. ಈಗ ಇಲ್ಲಿ ಜಪಾನ್ ಮತ್ತು ಚೀನ ದೇಶದ ಬೌದ್ಧ ಭಕ್ತರು ಕಟ್ಟಿಸಿರುವ ಅಂದವಾದ ದೇವಾಲಯ ಮತ್ತು ವಿಹಾರಗಳು ಇವೆ.	
												(ಕೆ.ವಿ.ಎಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ